Sometimes, one's own pain becomes a strength to serve many

Ramesh Belli's story is one such example........

Find Out More

You can make a difference !

Mission Goals & ObjectivesBelli Chukki at a Glance !

The Model

History & Activities Report

Inspiration

ಜನ ಸೇವೆಗೆ 'ಕರ'ಜೋಡಿಸಿ ನಿಂತ 'ವಿದ್ಯಾ'ವಂತ
ಸೇವೆಯೇ ಜೀವನ ಎಂದು ನಂಬಿ, ಹಾಗೆಯೇ ಬದುಕುತ್ತಿರುವವರು ಚೆನ್ನೈನ ವಿದ್ಯಾಕರ್. ಉದವುಂ ಕರಂಗಳ್ ಎಂಬ ಹೆಸರಿನ ಅವರ ಸಂಸ್ಥೆಯಲ್ಲಿ ಈಗ 1600 ಮಂದಿ ಆಶ್ರಯ ಪಡೆದಿದ್ದಾರೆ. ದಿಕ್ಕು ತಪ್ಪಿದ ಎಲ್ಲರಿಗೂ ದಿಕ್ಕಾಗಿರುವ, ಒಂದು ತಲೆಮಾರಿಗೇ ರೋಲ್ ಮಾಡೆಲ್ ಆಗುವಂಥ ವ್ಯಕ್ತಿತ್ವದ ವಿದ್ಯಾಕರ್ ಬೆಳೆದು ಬಂದ ಬಗೆಯನ್ನು ಅವರದೇ ಮಾತುಗಳಲ್ಲಿ ಕೇಳೋಣ...
'ನಾನು ಹುಟ್ಟಿದ್ದು 1953ರಲ್ಲಿ, ಮೈಸೂರು ಜಿಲ್ಲೆ ಕೊಳ್ಳೇಗಾಲಕ್ಕೆ ಸಮೀಪದ ಹಳ್ಳಿಯಲ್ಲಿ. ಆಕಸ್ಮಿಕವಾಗಿ ಪೆಟ್ಟು ಮಾಡಿಕೊಂಡು ನರಳುವವರು, ಅನಾರೋಗ್ಯದಿಂದ ಹಾಸಿಗೆ ಹಿಡಿದವರು, ಆಸ್ಪತ್ರೆಗಳಲ್ಲಿ ನೋಡಿಕೊಳ್ಳುವವರಿಲ್ಲದೆ ಕಂಗಾಲಾದವರು... ಇಂಥವರ ಸೇವೆ ಮಾಡುವುದರಲ್ಲಿ ತುಂಬಾ ಖುಷಿಯಾಗುತ್ತಿತ್ತು. ಕಷ್ಟದಲ್ಲಿದ್ದವರಿಗೆ ನೆರವಾಗಬೇಕೆಂಬ ಕಾರಣದಿಂದಲೇ ಶಾಲೆಯನ್ನು ತಪ್ಪಿಸಿಕೊಳ್ಳುತ್ತಿದ್ದೆ. ನನ್ನ ಈ ವರ್ತನೆ, ಮನೆಯಲ್ಲಿ ಯಾರಿಗೂ ಇಷ್ಟವಾಗುತ್ತಿರಲಿಲ್ಲ. 'ಅವರಿವರಿಗೆ ಹೆಲ್ಪರ್ ಥರಾ ಇದ್ದು ಬದುಕೋಕೆ ಸಾಧ್ಯ ಇಲ್ಲ ಕಣೋ. ಈ ಕೆಲಸ ನಿಲ್ಲಿಸಿ ಬಿಡೋ' ಎಂದೆಲ್ಲಾ ಮನೆಯಲ್ಲಿ ಬೈದು ಬುದ್ಧಿ ಹೇಳಿದರು. ಉಹುಂ, ಅಂಥಾ ಮಾತುಗಳಿಗೆ ನಾನು ಕಿವಿಗೊಡಲಿಲ್ಲ.
ಹೀಗಿರುವಾಗಲೇ ಅದೊಮ್ಮೆ ನಮ್ಮ ಊರಿನ ದಾರಿಯಲ್ಲಿ ಕಾರು ಅಪಘಾತಕ್ಕೀಡಾಯಿತು. ಕಾರಿನಲ್ಲಿದ್ದ ವ್ಯಕ್ತಿಗೆ, ತೀವ್ರವಾದ ಗಾಯಗಳಾಗಿವೆಯೆಂದೂ, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆಂದೂ, ತಮಿಳ್ನಾಡು ಮೂಲದ ಆ ವ್ಯಕ್ತಿಯೊಂದಿಗೆ ಮತ್ಯಾರೂ ಇಲ್ಲವೆಂದೂ ಗೊತ್ತಾಯಿತು. ತಕ್ಷಣವೇ ಆಸ್ಪತ್ರೆಗೆ ಹೋದೆ. ಆ ವ್ಯಕ್ತಿಯ ಬಂಧುವಿನಂತೆಯೇ ಸೇವೆಗೆ ನಿಂತೆ. ಹೀಗೇ ಎರಡು ವಾರ ಕಳೆಯಿತು. ಆ ವ್ಯಕ್ತಿಯೊಂದಿಗೆ ಯಾರೂ ಇರದಿದ್ದ ಕಾರಣ, ನಾನು ಮನೆಗೇ ಹೋಗಲಿಲ್ಲ. ಈ ಸಂದರ್ಭದಲ್ಲಿಯೇ, ಗಾಯಗೊಂಡಿದ್ದ ವ್ಯಕ್ತಿಯ ಹೆಸರು ರಾಮಕೃಷ್ಣನ್ ಎಂದೂ, ಮದ್ರಾಸ್‌ನಲ್ಲಿ ಅವರು ಆಟೋಮೊಬೈಲ್ ಬಿಡಿ ಭಾಗಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದಾರೆಂದೂ ತಿಳಿದುಬಂತು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ನನಗೆ ತಮಿಳು ಗೊತ್ತಿರಲಿಲ್ಲ. ಹೀಗಿದ್ದರೂ 15 ದಿನಗಳ ಕಾಲ ನಿರಂತರವಾಗಿ ಅವರ ಸೇವೆ ಮಾಡಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಕೂಡಲೇ, ಮದ್ರಾಸ್‌ನಲ್ಲಿದ್ದ ಅವರ ಬಂಧುಗಳಿಗೆ ಸುದ್ದಿ ತಲುಪಿಸಿದ್ದಾಯ್ತು. ಮರುದಿನವೇ ಅವರೆಲ್ಲ ಧಾವಿಸಿ ಬಂದರು. ಪರಿಚಯವಿಲ್ಲದಿದ್ದರೂ, ಭಾಷೆ ಅರ್ಥವಾಗದಿದ್ದರೂ15 ದಿನಗಳ ಕಾಲ ರಾಮಕೃಷ್ಣನ್‌ರ ಸೇವೆ ಮಾಡಿದ ನನ್ನನ್ನು ಕಂಡು ಆ ಕುಟುಂಬದವರಿಗೆ ಆಶ್ಚರ್ಯ, ಆನಂದ. ನನ್ನ ಸೇವೆಗೆ ಪ್ರತಿಯಾಗಿ ಏನಾದರೂ ಕೊಡಬೇಕೆಂದು ಅವರೆಲ್ಲ ಆಸೆಪಟ್ಟರು. ಅಂಥ ನಿರೀಕ್ಷೆಗಳೇ ನನಗಿರಲಿಲ್ಲ. ಅದನ್ನು ನೇರವಾಗಿಯೇ ಹೇಳಿದೆ. ಅವರೆಲ್ಲ ಮದ್ರಾಸ್‌ಗೆ ಹೋಗುವ ಮೊದಲು, ತಮ್ಮ ಅಡ್ರೆಸ್ ಕೊಟ್ಟು, ನಿನಗೆ ಕಷ್ಟ ಬಂದ್ರೆ ನಮ್ಮನ್ನು ಸಂಪರ್ಕಿಸು. ಸಹಾಯ ಮಾಡ್ತೇವೆ ಎಂದರು.
ಆಸ್ಪತ್ರೆಯಿಂದ ಮನೆಗೆ ಬಂದರೆ, ಎಲ್ಲರಿಂದ ಛೀಮಾರಿಯ ಸ್ವಾಗತ ದೊರೆಯಿತು. ಆನಂತರದಲ್ಲೂ ನನ್ನ ವರ್ತನೆ ಬದಲಾಗಲಿಲ್ಲ. ಈ ಕಾರಣಕ್ಕಾಗಿಯೇ ಹೆತ್ತವರೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಅದೊಂದು ದಿನ-'ನಾನು ಮದ್ರಾಸಿಗೆ ಹೋಗಿ, ಏನಾದ್ರೂ ಕೆಲ್ಸ ಮಾಡಿಕೊಂಡು ಬದುಕುತ್ತೇನೆ' ಎಂದವನೇ ಮದ್ರಾಸ್‌ನ ರೈಲು ಹತ್ತಿ ಬಿಟ್ಟೆ. ರಾಮಕೃಷ್ಣನ್‌ರ ಅಡ್ರೆಸ್ ಇದ್ದ ಚೀಟಿ ಬಿಟ್ಟರೆ, ನಯಾಪೈಸೆಯೂ ಇರಲಿಲ್ಲ. ಟಿಕೆಟ್ ಇಲ್ಲದ ಪ್ರಯಾಣ! ಮದ್ರಾಸ್ ರೈಲು ನಿಲ್ದಾಣದಿಂದ ಅವರಿವರಲ್ಲಿ ವಿಚಾರಿಸುತ್ತಾ ರಾಮಕೃಷ್ಣನ್‌ರ ಮನೆ ತಲುಪಿದರೆ ಶಾಕ್ ಕಾದಿತ್ತು: ಅವರು ಮನೆ ಖಾಲಿ ಮಾಡಿ ಬೇರೊಂದು ಏರಿಯಾಕ್ಕೆ ಹೋಗಿ ಬಿಟ್ಟಿದ್ದರು. ರಾಮಕೃಷ್ಣನ್ ಸಿಕ್ಕರೆ ಎಲ್ಲ ಸಮಸ್ಯೆಗೂ ಪರಿಹಾರವಿದೆ ಅಂದುಕೊಂಡೇ ನಾನು ಮನೆ ಬಿಟ್ಟು ಬಂದಿದ್ದೆ. ಆದರೆ, ನನ್ನ ಅಂದಾಜುಗಳೆಲ್ಲಾ ಉಲ್ಟಾ ಆಗಿದ್ದವು. ಹೀಗೆಲ್ಲಾ ಆದಾಗ ನನಗೆ 13 ವರ್ಷ. ಊರಿಗೆ ಹಿಂದಿರುಗುವ ಮನಸ್ಸಿರಲಿಲ್ಲ. ಹಾಗಾಗಿ, ಮುಂದಿನ 15 ದಿನ ರಾಮಕೃಷ್ಣನ್‌ರನ್ನು ಹುಡುಕಿಕೊಂಡು ಬೀದಿ ಬೀದಿ ಅಲೆದೆ. ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿದೆ. ಯಾವುದೋ ಮೂಲೆಯಲ್ಲಿ ಮಲಗಿ ರಾತ್ರಿ ಕಳೆದೆ. ತಮಿಳು ಗೊತ್ತಿಲ್ಲದ ಕಾರಣ, ತುಂಬಾ ತೊಂದರೆಯಾಯ್ತು. ಆದರೂ ಎದೆಗುಂದದೆ ಹುಡುಕಾಟ ಮುಂದುವರಿಸಿದೆ. ಕಡೆಗೊಂದು ದಿನ ರಾಮಕೃಷ್ಣನ್ ಸಿಕ್ಕಿ ಬಿಟ್ಟರು. ನನ್ನನ್ನು ಕಂಡು ಅವರಿಗೆ ಅಚ್ಚರಿ. ಎಲ್ಲವನ್ನೂ ಅವರಲ್ಲಿ ಹೇಳಿಕೊಂಡೆ. 'ನಮ್ಮ ಮನೆಯ ಸದಸ್ಯರಲ್ಲಿ ನೀನೂ ಒಬ್ಬ. ಇನ್ನು ಮುಂದೆ ನಮ್ಮಲ್ಲಿಯೇ ಇರು' ಅಂದರು. ಮದ್ರಾಸ್‌ನ ಕನ್ನಡ ಸಂಘದ ಶಾಲೆಗೆ ಸೇರಿಸಿದ್ರು. ಮುಂದೆ, ಮದ್ರಾಸ್ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನಿಂದ, ಸೈಕಿಯಾಟ್ರಿಯಲ್ಲಿ ಮಾಸ್ಟರ್ಸ್ ಪದವಿ ಪಡೆದೆ. ಅಪರಿಚಿತರಾದರೂ ಸರಿ, ಕಷ್ಟ ಎಂದವರಿಗೆ ಸಹಾಯ ಮಾಡಬೇಕು ಎಂಬ ನಿಲುವು ಆಗಲೂ ನನ್ನೊಂದಿಗಿತ್ತು. ಇದನ್ನು ಗಮನಿಸಿದ ರಾಮಕೃಷ್ಣನ್ - 'ಕೌನ್ಸೆಲಿಂಗ್ ಮಾಡಿಕೊಂಡೇ ಬದುಕು ಕಟ್ಟಿಕೊಳ್ಳಬಹುದು. ಆ ಬಗ್ಗೆ ಯೋಚಿಸು' ಅಂದರು.
ಮದರ್ ಥೆರೇಸಾ, ನನ್ನ ರೋಲ್ ಮಾಡೆಲ್. ನನ್ನ ಬದುಕಿಗೆ ಅವರೇ ಆದರ್ಶ. ಅವರ ಟೀಂಗೆ ಸೇರಿಕೊಂಡು ಸೇವೆ ಸಲ್ಲಿಸಬೇಕು ಎಂಬುದು ನನ್ನ ಮಹದಾಸೆಯಾಗಿತ್ತು. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನೂ ಮಾಡಿದೆ. ಆ ಸಂದರ್ಭದಲ್ಲಿ ಹಲವರು -'ಥೆರೇಸಾರ ಟೀಂನಲ್ಲಿ ಕ್ರಿಶ್ಚಿಯನ್ನರಿಗೆ ಮಾತ್ರ ಪ್ರವೇಶ' ಅಂದರು. ಅದು ನಿಜವೋ, ಸುಳ್ಳೋ ಗೊತ್ತಾಗಲಿಲ್ಲ. ಆದರೆ ಆ ಮಾತು ಕೇಳಿ ನಿರಾಸೆಯಾಯ್ತು. ಅವರ ಟೀಂ ಸೇರದಿದ್ರೂ ಪರವಾಗಿಲ್ಲ. ಆದರೆ, ಅವರಂತೆಯೇ ಸೇವೆ ಮಾಡಬೇಕೆಂದು ನಿರ್ಧರಿಸಿದೆ. ಈ ಮಧ್ಯೆ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನಲ್ಲಿ ಮನಶ್ಯಾಸ್ತ್ರಜ್ಞ ಆಗಿ ಸೇರಿಕೊಂಡೆ. ಈ ಸಂದರ್ಭದಲ್ಲಿ ಬಗೆಬಗೆಯ ರೋಗಿಗಳೊಂದಿಗೆ, ಅವರ ಕುಟುಂಬದೊಂದಿಗೆ ಚರ್ಚಿಸುವ ಅವಕಾಶ ಸಿಕ್ತು. ರೋಗಿಗಳು ಕೂಡ ಉಳಿದವರ ಥರಾನೇ ಮನುಷ್ಯರೇ. ಅವರನ್ನು ಅಸ್ಪೃಶ್ಯರ ಥರಾ ನೋಡಬೇಡಿ ಎಂದೆಲ್ಲಾ ಕುಟುಂಬಗಳ ಸದಸ್ಯರಿಗೆ ಬುದ್ಧಿ ಹೇಳಿದ್ದೆ. ಬೇಗ ಚೇತರಿಸಿಕೊಂಡು ಹೊಸ ಬದುಕು ಆರಂಭಿಸುವ ಬಗ್ಗೆ ರೋಗಿಗಳಿಗೂ ಹೇಳಿಕೊಡ್ತಾ ಇದ್ದೆ. ಇವೆಲ್ಲಾ ನನ್ನ ಮೇಲಧಿಕಾರಿಗಳಿಗೆ ಇಷ್ಟವಾಗಲಿಲ್ಲ. ನಿಮಗೆ ವಹಿಸಿರ್ತೇವಲ್ಲ, ಅಷ್ಟು ಕೆಲಸ ಮಾಡಿದ್ರೆ ಸಾಕು ಎಂಬರ್ಥದ ಮಾತುಗಳನ್ನಾಡಿದರು. ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದೇ ಬೇಡ ಅನ್ನಿಸಿತು. ಕೆಲವೇ ದಿನಗಳಲ್ಲಿ ಆ ಕೆಲಸ ಬಿಟ್ಟೆ.
ಈ ಹೊತ್ತಿಗೆ ರಾಮಕೃಷ್ಣನ್ ಅವರಿಗೆ ಮದುವೆಯಾಗಿತ್ತು. ಹೊಸ ಜವಾಬ್ದಾರಿಗಳು ಅವರ ಹೆಗಲೇರಿದ್ದವು. ಹಾಗಾಗಿ ಕೊಳೆಗೇರಿಯಲ್ಲಿದ್ದ ಪುಟ್ಟ ಮನೆಗೆ ವಾಸ್ತವ್ಯ ಬದಲಿಸಿದೆ. ಹೀಗಿರುವಾಗಲೇ ಅದೊಂದು ರಾತ್ರಿ ಸೈಕಲ್ ರಿಕ್ಷಾ ಓಡಿಸುವ ವ್ಯಕ್ತಿಯೊಬ್ಬ, ನ್ಯೂಸ್ ಪೇಪರ್‌ಗಳಲ್ಲಿ ಸುತ್ತಿ ಇಡಲಾಗಿದ್ದ ಪುಟ್ಟ ಮಗುವನ್ನು ನನ್ನ ಕೈಗಿಟ್ಟು ಹೇಳಿದ; 'ಸರ್, ಸಿನಿಮಾ ಥಿಯೇಟರಿನಲ್ಲಿ ಯಾರೋ ಈ ಮಗೂನ ಬಿಟ್ಟು ಹೋಗಿದ್ದಾರೆ. ಈ ಮಗುವಿಗೆ ಇನ್ಮೇಲೆ ನೀವೇ ದಿಕ್ಕು...'
ಹೀಗೆ ನನಗೆ ಸಿಕ್ಕಿದ್ದು 6 ತಿಂಗಳ ಮಗು. ಎಳೆಯ ಮಕ್ಕಳನ್ನು ಸಾಕುವುದು ಹೇಗೆ ಎಂದು ಆಗ ನನಗೆ ಖಂಡಿತ ಗೊತ್ತಿರಲಿಲ್ಲ. ಆದರೆ, ಅದೊಂದೇ ಕಾರಣ ಹೇಳಿ, ಮಗುವನ್ನು ತಿರಸ್ಕರಿಸಲು ಮನಸ್ಸು ಬರಲಿಲ್ಲ. ಆ ಮಗುವನ್ನು ಜೊತೆಗಿಟ್ಟುಕೊಂಡೆ. ಅದಕ್ಕೆ ಪ್ರಭು ಎಂದು ಹೆಸರಿಟ್ಟೆ. ಹೊಟ್ಟೆಪಾಡಿಗೆ, ರಾಮಕೃಷ್ಣನ್‌ರ ಅಂಗಡಿಯ ನೌಕರಿಯಿತ್ತು. ಇಂಗ್ಲಿಷ್ ಮೀಡಿಯಂನಲ್ಲಿ ಡಿಗ್ರಿ ಆಗಿದ್ದರೂ, ತಮಿಳನ್ನು ಓದಲು-ಬರೆಯಲು ಬರುವುದಿಲ್ಲ ಎಂಬ ಕಾರಣ ನೀಡಿ ನನಗೆ ಸರ್ಕಾರಿ ನೌಕರಿಯನ್ನು ನಿರಾಕರಿಸಲಾಯಿತು. ಆನಂತರದ ದಿನಗಳಲ್ಲಿ ನನ್ನ ಮಡಿಲಿಗೆ ಬಂದ ಮಕ್ಕಳ ಸಂಖ್ಯೆ 20ಕ್ಕೇರಿತು. ಎಲ್ಲವೂ ಅನಾಥ ಮಕ್ಕಳೇ. ಅವರ ಆರೈಕೆಗೆ ಹಣ ಸಾಲದೇ ಹೋದಾಗ ಪರಿಚಯದ ಮಂದಿಗೆ ಎಲ್ಲವನ್ನೂ ವಿವರಿಸಿ ಸಹಾಯ ಮಾಡುವಂತೆ ವಿನಂತಿಸುತ್ತಿದ್ದೆ. ಹಲವರು, ತಕ್ಷಣವೇ ಸ್ಪಂದಿಸುತ್ತಿದ್ದರು. ಸೇವೆಯೇ ಬದುಕು ಎಂದು ಆ ಹೊತ್ತಿಗೆ ನಿರ್ಧರಿಸಿ ಆಗಿತ್ತು. ಹಾಗಾಗಿ, ಮದುವೆಯಾಗಬಾರದು ಎಂದು ನಿರ್ಧರಿಸಿ ಬಿಟ್ಟಿದ್ದೆ. ಕೊಳೆಗೇರಿಯ ಜನರಿಗೆ ಆರೋಗ್ಯ ತಪಾಸಣೆ ಮಾಡಿಸುವುದು, ಪೆನ್ಶನ್ ಕೊಡಿಸುವುದು, ಬ್ಯಾಂಕ್‌ನಿಂದ ಸಾಲ ಕೊಡಿಸುವುದು,. ಮಕ್ಕಳಿಗೆ ಉಚಿತವಾಗಿ ಪಾಠ ಹೇಳುವುದು... ಹೀಗೆಲ್ಲಾ ಸೇವೆ ಮಾಡಲು ಮುಂದಾಗ್ತಾ ಇದ್ದೆ. ಇದನ್ನು ಕಂಡು ಹಲವರಿಗೆ ಅನುಮಾನ. ಕೆಲವರು ನೇರವಾಗೇ ಕೇಳಿಬಿಟ್ರು: 'ಸ್ವಾಮೀ, ನೀವು ಓದಿಕೊಂಡವರು. ನೌಕರೀಲಿ ಇರುವವರು. ಹಾಗಿದ್ರೂ ಇಂಥ ಸೇವೆಯ ಹುಚ್ಚು ಯಾಕೆ? ಇದರಿಂದ ನಿಮಗೆ ಏನು ಅನುಕೂಲ ಇದೆ?' ಮುಂದೆ ನನ್ನ ಕೆಲಸ ಗಮನಿಸಿದ ಮೇಲೆ ಎಲ್ಲರಿಗೂ ನಂಬಿಕೆ ಬಂತು.
ಹೀಗಿರುವಾಗಲೇ ಅದೊಂದು ರಾತ್ರಿ ನಾವು ವಾಸವಿದ್ದ ಕೊಳೆಗೇರಿಗೆ ಬೆಂಕಿ ಬಿದ್ದು ಎಲ್ಲ ಮನೆಗಳೂ ಸುಟ್ಟು ಹೋದವು. ಪುಣ್ಯವಶಾತ್ ಯಾವುದೇ ಪ್ರಾಣಾಪಾಯವಾಗಲಿಲ್ಲ. 20 ಪುಟ್ಟ ಪುಟ್ಟ ಮಕ್ಕಳೊಂದಿಗೆ ಇಡೀ ರಾತ್ರಿಯನ್ನು ರಸ್ತೆ ಬದಿಯಲ್ಲೇ ಕಳೆದೆ. ಮರುದಿನ ಮುಂಜಾನೆ, ಅದೇ ದಾರಿಯಲ್ಲಿ ಜಾಗಿಂಗ್ ಬಂದ ಶ್ರೀಮಂತರೊಬ್ಬರು ನನ್ನನ್ನು ಗುರುತಿಸಿದರು. ನಡೆದದ್ದನ್ನೆಲ್ಲ ವಿವರಿಸಿದೆ. ನಮ್ಮ ಮನೆಯಲ್ಲಿ ಔಟ್‌ಹೌಸ್ ಖಾಲಿಯಿದೆ. ಅಲ್ಲಿಗೆ ಬಂದು ಬಿಡಿ ಎಂದರು. ಹಾಗೆಯೇ ಮಾಡಿದೆ. ನಂತರದ ಕೆಲವೇ ತಿಂಗಳಲ್ಲಿ ಶ್ರೀಮಂತರ ಮೂಲಕವೇ ದೊಡ್ಡದೊಂದು ಮನೆಗೆ ಶಿಫ್ಟ್ ಆದೆ.
ಈ ಹೊತ್ತಿಗೆ, ನಾನು ಅನಾಥರು, ಆಶ್ರಯ ತಪ್ಪಿದವರು, ರೋಗಿಗಳು, ಭಿಕ್ಷುಕರು... ಹೀಗೆ ಹಲವರಿಗೆ ಪೋಷಕನಾಗಿರುವ ಸುದ್ದಿ ಅವರಿವರ ಮೂಲಕವೇ ಹರಡಿ ಮದ್ರಾಸ್‌ನ ಗಡಿ ದಾಟಿ ಸುದ್ದಿಯಾಗಿತ್ತು. ಆಶ್ರಯ ಬೇಡಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚತೊಡಗಿತು. ಆಗ, ಶುರುವಾದದ್ದೇ ಉದವುಂ ಕರಂಗಳ್! ಇದು ನನ್ನ ಮನೆಯ ಹೆಸರು, ಸಂಸ್ಥೆಯ ಹೆಸರು. ಉದವುಂ ಕರಂಗಳ್ ಎಂದರೆ ತಮಿಳಿನಲ್ಲಿ ನೆರವಿನ ಹಸ್ತ ಎಂದು ಅರ್ಥವಿದೆ. ಕಷ್ಟ ಎಂದವರಿಗೆಲ್ಲ ನೆರವಾಗಬೇಕು ಎಂಬ ಸದಾಶಯ ಇದ್ದುದರಿಂದ ಈ ಹೆಸರನ್ನೇ ಆಯ್ಕೆ ಮಾಡಿಕೊಂಡೆ. ದಿನಗಳು ಉರುಳುತ್ತಾ ಹೋದಂತೆಲ್ಲ ನನ್ನೊಂದಿಗೆ ಬದುಕುವವರ ಸಂಖ್ಯೆ ಹೆಚ್ಚಾಗಬಹುದು ಅನಿಸಿದ್ದರಿಂದ ಮದ್ರಾಸ್‌ನ ಹೊರವಲಯದಲ್ಲಿ 1983ರ ಸಂದರ್ಭದಲ್ಲಿಯೇ ಸ್ವಲ್ಪ ಜಮೀನು ಖರೀದಿಸಿದೆ. ಆಗ ಖರೀದಿಸಿದ್ದ ಜಾಗದಲ್ಲಿಯೇ ಈಗ ಉದವುಂ ಕರಂಗಳ್‌ನ ಬಿಲ್ಡಿಂಗ್ ಎದ್ದು ನಿಂತಿದೆ. ದಾನಿಗಳು ಹಾಗೂ ಹಿತೈಷಿಗಳ ನೆರವಿನಿಂದಲೇ ಇದೆಲ್ಲಾ ಸಾಧ್ಯವಾಗಿದೆ.
ಉದವುಂ ಕರಂಗಳ್‌ನಲ್ಲಿ ಈಗ ಒಟ್ಟು 1600 ಮಂದಿ ಇದ್ದಾರೆ. ಎಲ್ಲರೂ ನನ್ನನ್ನು 'ಪಪ್ಪಾ' ಎಂದು ಕರೆಯುತ್ತಾರೆ. ಚೆನ್ನೈನ ಹಲವರ ಪಾಲಿಗೆ ನಾನು ಪಪ್ಪಾ ವಿದ್ಯಾಕರ್! ಬ್ರಹ್ಮಚಾರಿಯಾಗಿದ್ದೂ ಪಪ್ಪಾ ಅನ್ನಿಸಿಕೊಂಡಿದ್ದಕ್ಕೆ ಒಂದು ಹಿನ್ನೆಲೆಯಿದೆ. ಏನೆಂದರೆ - ಆರಂಭದಲ್ಲಿ ನನ್ನ ಮಡಿಲಿಗೆ ಬಂದವರೆಲ್ಲ ಹಾಲುಗಲ್ಲದ ಅನಾಥ ಮಕ್ಕಳು. ದೊಡ್ಡವರಾದ ನಂತರ ಅವರಿಗೆ ತಂದೆಯ ಸ್ಥಾನದಲ್ಲಿ ನಾನಿದ್ದೆ. ಹಾಗಾಗಿ, ಎಲ್ಲ ಮಕ್ಕಳೂ ಪಪ್ಪಾ ಅನ್ನಲು ಪ್ರಾರಂಭಿಸಿದರು. ಕಾಲಕ್ರಮೇಣ, ಮಲತಾಯಿಯ ಕಾಟದಿಂದ ಬೇಸತ್ತವರು, ಕಾಮಾಟಿಪುರದಿಂದ ತಪ್ಪಿಸಿಕೊಂಡವರು, ಹೆತ್ತ ಮಕ್ಕಳಿಂದಲೇ ಹೊರದಬ್ಬಿಸಿಕೊಂಡ ಹಿರಿಯರು, ಏಡ್ಸ್ ಪೀಡಿತರು, ಕ್ಯಾನ್ಸರ್ ಇದ್ದವರು, ಭಿಕ್ಷುಕರು, ನಿರ್ಗತಿಕರು,... ಹೀಗೆ ಹಲವು ವೆರೈಟಿಯ ಜನ ಉದವುಂ ಕರಂಗಳ್‌ನಲ್ಲಿ ಆಶ್ರಯ ಪಡೆದರು. ಹಿರಿಯರ ಪಾಲಿಗೆ ನಾನು ಮಗನಾದೆ. ಕಿರಿಯರ ಪಾಲಿಗೆ ಅಣ್ಣನಾದೆ. ಮಕ್ಕಳ ಪಾಲಿಗೆ ಅಪ್ಪ-ಅಮ್ಮ ಎರಡೂ ಆದೆ. ಆಗ ನನ್ನನ್ನು ಎಲ್ಲರೂ ಪ್ರೀತಿಯಿಂದ ಕರೆದ ಪದವೇ-ಪಪ್ಪಾ ವಿದ್ಯಾಕರ್.
ಒಂದು ಮಾತನ್ನು ಸ್ಪಷ್ಟಪಡಿಸಬೇಕು. ಉದವುಂ ಕರಂಗಳ್ ಎಂಬುದು ಅನಾಥಾಶ್ರಮವಲ್ಲ. ಅದೊಂದು ಮನೆ. ಆಟದ ಅಂಗಳ. ಆಶ್ರಯತಾಣ. ಎಲ್ಲ ವಯಸ್ಸಿನವರಿಗೂ ಅಲ್ಲಿ ಪ್ರವೇಶ ಉಂಟು. 1600 ಮಂದಿಯನ್ನು ಸಾಕುವುದು ಅಂದರೆ ತಮಾಷೆಯಲ್ಲ. ಆದರೆ ಇವತ್ತಿನವರೆಗೂ -'ಸ್ವಾಮೀ, ನಮಗೆ ಸಹಾಯ ಮಾಡಿ' ಎಂದು ಯಾರ ಮುಂದೆಯೂ ಕೈ ಜೋಡಿಸಿ ನಿಂತಿಲ್ಲ. ವಿದೇಶಿ ಫಂಡ್‌ಗೆ ಆಸೆಪಟ್ಟಿಲ್ಲ. ಉದವುಂ ಕರಂಗಳ್‌ನ ಬಗ್ಗೆ ಪತ್ರಿಕೆಗಳು ಅಭಿಮಾನದಿಂದ ಬರೆದಿವೆ. ಸಾವಿರಾರು ಜನರು ಉದಾರವಾಗಿ ನೀಡುತ್ತಿರುವ ದೇಣಿಗೆಯೇ ಈವರೆಗೂ ನಮ್ಮನ್ನು ಸಲಹಿದೆ. ಈಗ ಚೆನ್ನೈನಲ್ಲಿ ಮಾತ್ರವಲ್ಲ, ಕೊಯಮತ್ತೂರಿನಲ್ಲೂ ನಮ್ಮ ಬ್ರಾಂಚ್ ಇದೆ. ನಮ್ಮಲ್ಲಿ ಆಶ್ರಯ ಪಡೆದವರ ಪಟ್ಟಿಯಲ್ಲಿ ದೇಶದ ಎಲ್ಲ ರಾಜ್ಯಗಳ, ಎಲ್ಲ ಧರ್ಮಗಳ ಜನ ಇದ್ದಾರೆ. ಅನಾರೋಗ್ಯದ ಕಾರಣ ಬೀದಿ ಪಾಲಾಗಿ, ನಂತರ ನಮ್ಮಲ್ಲಿ ಆಶ್ರಯ ಪಡೆದು ಗುಣಮುಖರಾಗಿ ಮರಳಿದ ವಿದೇಶಿಯರೂ ಇದ್ದಾರೆ.
ಉದವುಂ ಕರಂಗಳ್‌ಗೆ ಈಗ 30 ವರ್ಷದ ಸಂಭ್ರಮ. ಈಗ ನಮ್ಮದೇ ಸ್ವಂತ ಶಾಲೆಯಿದೆ. ಆಸ್ಪತ್ರೆಯಿದೆ. ಎರಡರಲ್ಲೂ ಉಚಿತ ಪ್ರವೇಶವಿದೆ. ದೇವರು ನಾನಾ ವೇಷದಲ್ಲಿ ಬಂದು ಭಕ್ತರನ್ನು ಪರೀಕ್ಷಿಸುತ್ತಾನೆ ಎಂದು ನಾವೆಲ್ಲಾ ಓದಿದ್ದೇವೆ ತಾನೆ? ಅದೇ ದೇವರು, ನನ್ನ ಸಂಸ್ಥೆಗೆ ಮಕ್ಕಳು, ವೃದ್ಧರು, ಭಿಕ್ಷುಕರು, ರೋಗಿಗಳು, ಮಾತು ಬಾರದವರು... ಹೀಗೆ ನಾನಾ ವೇಷದಲ್ಲಿ ಬಂದು ಜೊತೆಗೇ ಉಳಿದಿದ್ದಾನೆ ಎಂಬುದು ನನ್ನ ನಂಬಿಕೆ. ದೇವರು ದಿನದಿನವೂ ಪರೀಕ್ಷೆ ನಡೆಸುತ್ತಾನೆ. ಪ್ರತಿ ಬಾರಿಯೂ ಅವನನ್ನು ಮೆಚ್ಚಿಸಬೇಕು ಎಂಬುದು ನನ್ನ ಹಿರಿಯಾಸೆ.
'ಸಾರ್, ನೀವು ಬ್ರಹ್ಮಚಾರಿ. ಅಂದ ಮೇಲೆ, ನಿಮ್ಮ ನಂತರ ಈ ಸಂಸ್ಥೆ ನಿಂತು ಹೋಗುತ್ತಾ? ಇದನ್ನು ಮುಂದುವರೆಸಿಕೊಂಡು ಹೋಗುವವರು ಯಾರು?' ಎಂಬುದು ಹಲವರ ಪ್ರಶ್ನೆ. ಯಾವುದೇ ಪ್ರತಿಫಲ ಬಯಸದೆ ಕೆಲಸ ಮಾಡುವ ಮೂವತ್ತಕ್ಕೂ ಹೆಚ್ಚು ಮಂದಿ ಈಗ ನನ್ನೊಂದಿಗಿದ್ದಾರೆ. ನನ್ನ ನಂತರ ಕೂಡ ಅವರು ಉದವುಂ ಕರಂಗಳ್ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗ್ತಾರೆ ಎಂಬ ವಿಶ್ವಾಸ ನನ್ನದು.
30 ವರ್ಷದ ಹಿಂದೆ ಪಿಳಿಪಿಳಿ ಕಣ್ಣು ಬಿಡುವ ಕಂದಮ್ಮಗಳಾಗಿ ನನ್ನ ಸುಪರ್ದಿಗೆ ಬಂದ ಮಕ್ಕಳು ಈಗ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ, ಯೋಧರಾಗಿ, ಹೋಟೆಲುಗಳ ಮಾಲೀಕರಾಗಿ, ಚಾರ್ಟರ್ಡ್ ಅಕೌಂಟೆಂಟ್‌ಗಳಾಗಿ ದುಡಿಯುತ್ತಿದ್ದಾರೆ. ಸ್ವತಂತ್ರ ಬದುಕು ಆರಂಭಿಸಿದ್ದಾರೆ. ಬಿಡುವಿನ ದಿನಗಳಲ್ಲಿ ಉದವುಂ ಕರಂಗಳ್‌ಗೆ ತಪ್ಪದೇ ಬರುತ್ತಾರೆ. ನಿಜ ಹೇಳಬೇಕೆಂದರೆ, ಆಶ್ರಯ ಕೋರಿ ಜನ ಬಂದಾಗ ಸಂಕಟ ಆಗುವುದಿಲ್ಲ. ಹೀಗೆ ಬಂದವರು ಅನಾರೋಗ್ಯದಿಂದ ದಿಢೀರ್ ಸತ್ತು ಹೋದಾಗ ದುಃಖವಾಗುತ್ತದೆ. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳಿಸುವಾಗ ಕರುಳು ಕತ್ತರಿಸಿಕೊಂಡ ಅನುಭವವಾಗುತ್ತದೆ. ನಾವೇನೋ ಆ ಮಕ್ಕಳನ್ನು ತುಂಬ ಮುದ್ದಿನಿಂದ, ಅಕ್ಕರೆಯಿಂದ ಸಾಕಿದ್ದೇವೆ. ಆದರೆ, ಗಂಡ ಅನ್ನಿಸಿಕೊಂಡವನು ಈ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳದೇ ಹೋದರೆ? ಬೈ ಛಾನ್ಸ್ ಹೊಡೆದು ಬಿಟ್ಟರೆ ಅನ್ನಿಸಿದಾಗೆಲ್ಲ ಆಗುವ ಸಂಕಟವನ್ನು ವಿವರಿಸಲು ಸಾಧ್ಯವಿಲ್ಲ. ಕಡೆಗೊಮ್ಮೆ, ಗಂಡನ ಮನೆಗೆ ಹೊರಟ ಮಕ್ಕಳು-'ಪಪ್ಪಾ, ಆರೋಗ್ಯ ಹುಷಾರು. ಟೇಕ್ ಕೇರ್. ಹೋಗಿ ಬರ್ಲಾ' ಅನ್ನುತ್ತಲೇ ಬಿಕ್ಕಿ ಬಿಕ್ಕಿ ಅಳುವಾಗ ನಾನಾದರೂ ಹೇಗೆ ಸುಮ್ಮನಿರಲಿ?' ಮತ್ತೊಂದು ಸಂದರ್ಭ ಕೇಳಿ: ಇತ್ತೀಚೆಗೊಮ್ಮೆ ವಿಪ್ರೋದಲ್ಲಿ ಎಂಜಿನಿಯರ್ ಆಗಿರುವ ಹುಡುಗನೊಬ್ಬ ಬಂದು, ಪಪ್ಪಾ, ಒಂದು ಸರ್‌ಪ್ರೈಸ್ ತೋರಿಸ್ತೇನೆ. ಆ ಕಡೆ ತಿರುಗಿ ಅಂದ. ಹಾಗೇ ಮಾಡಿದೆ. ನಂತರ ಅವನು ತೋರಿಸಿದ್ದೇನು ಗೊತ್ತೆ? ಅವನ 7ನೇ ತರಗತಿಯ ಪ್ರೊಗ್ರೆಸ್ ರಿಪೋರ್ಟು! ಅದರಲ್ಲಿ ತಂದೆಯ ಹೆಸರು ಎಂಬ ಜಾಗದಲ್ಲಿ ಪಪ್ಪಾ ವಿದ್ಯಾಕರ್ ಎಂದು ಬರೆದಿದ್ದ. ತಾಯಿಯ ಹೆಸರು ಎಂಬ ಜಾಗದಲ್ಲೂ ಅದೇ ಹೆಸರಿತ್ತು! ಅವನನ್ನು ಬಾಚಿ ತಬ್ಬಿಕೊಂಡು 'ಕಂದಾ' ಅನ್ನುವುದರೊಳಗೆ ನಾನು ಅಳತೊಡಗಿದ್ದೆ. ಅವನೂ...
ಕಡೆಯದಾಗಿ ಒಂದು ಮಾತು ಹೇಳಲು ಆಸೆಪಡ್ತೇನೆ. ಏನೆಂದರೆ, ಉದವುಂ ಕರಂಗಳ್ ಥರದ ಸಂಸ್ಥೆಗಳ ಸಂಖ್ಯೆ ಹೆಚ್ಚಬಾರದು. ಕಡಿಮೆ ಆಗಬೇಕು. ಜಗತ್ತಿನಲ್ಲಿ ಅನಾಥರು, ರೋಗಿಗಳು, ನಿರ್ಗತಿಕರು ಇಲ್ಲದಂತಾಗಬೇಕು. ಮಕ್ಕಳನ್ನೂ ಹಿರಿಯರೂ, ಹಿರಿಯರನ್ನು ಮಕ್ಕಳೂ ಪ್ರೀತಿಯಿಂದ ನೋಡಿಕೊಂಡ್ರೆ ಯಾರೂ ಅನಾಥರೇ ಆಗೋದಿಲ್ಲ ಅಲ್ವಾ? ಎನ್ನುತ್ತಾ ಮಾತು ಮುಗಿಸಿದರು ವಿದ್ಯಾಕರ್. ಅಂದಹಾಗೆ, ಉದವುಂ ಕರಂಗಳ್‌ಗೆ ನೀವೂ ನೆರವಾಗಬಹುದು. ವಿದ್ಯಾಕರ್ ಅವರನ್ನು  udavum@vsnl.comನಲ್ಲಿ ಸಂಪರ್ಕಿಸಬಹುದು.

**********************************************************************************

ಫುಟ್‌ಪಾತ್ ಮಡಿಲಿಂದ ಐಎಎಸ್ ಅಂಗಳಕ್ಕೊಂದು ಕನಸು...‌
ಹೆತ್ತವರಿಗೆ ಬೇಡವಾದ ಮಕ್ಕಳನ್ನು ನಮ್ಮ ಸಮಾಜ 'ಅನಾಥ ಮಕ್ಕಳು' ಎಂದು ಕರೆಯುತ್ತದೆ. ಇಂಥ ಮಕ್ಕಳು ಹೆಚ್ಚಿನ ಸಂದರ್ಭಗಳಲ್ಲಿ ಅನಾಥಾಶ್ರಮದಲ್ಲಿ ಬಾಲ್ಯ ಕಳೆಯುತ್ತಾರೆ. ಆನಂತರದಲ್ಲಿ ಅವರೆಲ್ಲಾ ಏನಾದರು/ಏನಾಗುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ವಿವರಣೆ ಲಭ್ಯವಾಗುವುದಿಲ್ಲ. ಈ ಮಾತಿಗೆ ಅಪವಾದ ಎಂಬಂಥ ಕಥಾನಕವೊಂದು ಇಲ್ಲಿದೆ. ಏನೆಂದರೆ-20 ವರ್ಷಗಳ ಹಿಂದೆ, ಚೆನ್ನೈ ಮಹಾನಗರದ ಪ್ರಮುಖ ಏರಿಯಾದಲ್ಲಿ ಒಂದಾದ ಅಣ್ಣಾನಗರ್‌ನ ಕಸದ ರಾಶಿಯ ಬದಿಯಲ್ಲಿ ಸಿಕ್ಕ ಮಗುವೊಂದು, ಇವತ್ತು ಐಎಎಸ್ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದೆ! ಆ ಮಗುವನ್ನು ಜೋಪಾನ ಮಾಡಿದ ವಿದ್ಯಾಕರ್ ಎಂಬ ಕರ್ನಾಟಕ ಮೂಲದ ವ್ಯಕ್ತಿ, ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡು ಆನಂದಭಾಷ್ಪ ಸುರಿಸುತ್ತಿದ್ದಾರೆ.
ಅಂದ ಹಾಗೆ, ಈಗ ಐಎಎಸ್ ಪರೀಕ್ಷೆಗೆ ಸಿದ್ಧವಾಗುತ್ತಿರುವ ಹುಡುಗನ ಹೆಸರು ಅಭಿಲಾಷ್ ವಿದ್ಯಾಕರ್. ಈ ಹುಡುಗ ತನ್ನ ಸುಪರ್ದಿಗೆ ಬಂದ ಬಗೆ ಹಾಗೂ ಬೆಳೆದ ರೀತಿಯ ಜೊತೆಜೊತೆಗೆ, ಅನಾಥ ಮಕ್ಕಳನ್ನು ಸಾಕಿದ ನಂತರ ಎದುರಾಗುವ ಕರುಳು ಹಿಂಡುವಂಥ ಸಂದರ್ಭಗಳ ಬಗ್ಗೆಯೂ ವಿದ್ಯಾಕರ್ ಮಾತಾಡಿದ್ದಾರೆ. ಮೊದಲಿಗೆ ಅವರ ಮಾತುಗಳನ್ನೂ, ಆನಂತರದಲ್ಲಿ ಅಭಿಲಾಷ್‌ನ ಮಾತುಗಳನ್ನೂ ಆಲಿಸೋಣ. ಈಗ, ಓವರ್ ಟು ವಿದ್ಯಾಕರ್.
'20 ವರ್ಷಗಳ ಹಿಂದಿನ ಮಾತು. ಆ ಹೊತ್ತಿಗಾಗಲೇ ಚೆನ್ನೈನಲ್ಲಿ ನಾನು ಉದವುಂ ಕರಂಗಳ್ ಹೆಸರಿನ ಸಂಸ್ಥೆ ಆರಂಭಿಸಿದ್ದೆ. ಅನಾಥ ಮಕ್ಕಳು, ನಿರ್ಗತಿಕರು ಹಾಗೂ ವೃದ್ಧರನ್ನು ಸಾಕುವುದು ನನ್ನ ಉದ್ದೇಶವಾಗಿತ್ತು. 1994ರ ಮಾರ್ಚ್ 7ನೇ ತಾರೀಖು, ಸೋಮವಾರದ ಮುಂಜಾನೆಯೇ ನಮ್ಮ ಆಫೀಸಿನ ಫೋನ್ ರಿಂಗಣಿಸಿತು. 'ಹಲೋ' ಎಂದೆ. ಆ ತುದಿಯಲ್ಲಿದ್ದ ವ್ಯಕ್ತಿ ಅವಸರದ ದನಿಯಲ್ಲಿ ಹೇಳಿದ: 'ಸಾರ್, ಅಣ್ಣಾನಗರ್‌ನ ಮುಖ್ಯ ಬೀದಿಯಲ್ಲಿ ಒಂದು ಕಸದ ತೊಟ್ಟಿ ಇದೆ. ಅದರ ಸಮೀಪದಲ್ಲೇ ಒಂದು ಬ್ಯಾಗ್‌ನಲ್ಲಿ ಮಗುವೊಂದನ್ನು ಯಾರೋ ಬಿಟ್ಟು ಹೋಗಿದ್ದಾರೆ ಸಾರ್. ಪ್ಲೀಸ್, ನೀವು ಆ ಮಗುವನ್ನು ರಕ್ಷಿಸಬೇಕು ಸಾರ್. ಪ್ಲೀಸ್...'
ಅವತ್ತಿನ ವೇಳೆಗೆ, ಅನಾಥ ಮಕ್ಕಳಿಗೆ ಆಶ್ರಯ ನೀಡುವ ವಿಷಯಕ್ಕೆ ನಮ್ಮ ಉದವುಂಕರಂಗಳ್ ಸಂಸ್ಥೆ ಹೆಸರಾಗಿತ್ತು. ಅಣ್ಣಾನಗರ್‌ಗೆ ನಮ್ಮ ಆಫೀಸಿನಿಂದ 8 ಕಿ.ಮೀ. ದೂರವಿತ್ತು. ಅವತ್ತಿಗೆ ನನ್ನ ಬಳಿ ಕಾರ್ ಇರಲಿಲ್ಲ. ಬಜಾಜ್ ಚೇತಕ್ ಸ್ಕೂಟರ್ ಇತ್ತು. ತಕ್ಷಣವೇ ಸ್ಕೂಟರ್ ಹತ್ತಿ ಹೊರಟೆ. ಫೋನ್‌ನಲ್ಲಿ ದೊರೆತ ಮಾಹಿತಿ ಆಧರಿಸಿಯೇ ಹುಡುಕಾಟ ನಡೆಸಿದೆ. ಆದರೆ, ಕಸದ ರಾಶಿಯ ಬಳಿಯಲ್ಲಿ ಬ್ಯಾಗ್ ಕಾಣಿಸಲಿಲ್ಲ. ಮಗುವಿನ ಚೀರಾಟ ಕೇಳಿಸಲಿಲ್ಲ. ಯಾರೋ ನನ್ನನ್ನು ಫೂಲ್ ಮಾಡಲು ಹೀಗೆಲ್ಲಾ ಫೋನ್ ಮಾಡಿರಬೇಕು ಎಂದುಕೊಂಡು ವಾಪಸ್ ಬಂದೆ. ಆಫೀಸ್ ತಲುಪುತ್ತಿದ್ದಂತೆಯೇ ಮತ್ತೆ ಫೋನ್ ರಿಂಗ್ ಆಯಿತು. 'ಹಲೋ' ಎನ್ನುತ್ತಿದ್ದಂತೆಯೇ, ಈ ಮೊದಲು ಮಾತನಾಡಿದ್ದ ವ್ಯಕ್ತಿಯೇ ಮತ್ತೆ ಮಾತಾಡಿದ: 'ಸಾರ್, ನೀವು ಕಸದ ತೊಟ್ಟಿ ಹತ್ರ ಬಂದಿದ್ರಿ ನಿಜ. ಅಲ್ಲಿಂದ ಹತ್ತು ಹೆಜ್ಜೆ ಮುಂದೆ ಹೋಗಬೇಕಿತ್ತು. ಅಲ್ಲಿ ಒಂದು ಬ್ಯಾಗ್ ಇದೆ. ಆ ಬ್ಯಾಗ್‌ನ ಜಿಪ್ ಹಾಕಿದೆ. ಆ ಬ್ಯಾಗ್ ಒಳಗೆ ಮಗು ಇದೆ ಸಾರ್. ಪ್ಲೀಸ್, ಲೇಟ್ ಮಾಡಬೇಡಿ. ತಕ್ಷಣ ಹೊರಡಿ ಸಾರ್. ನೀವು ತಡ ಮಾಡಿದರೆ ಮಗುವಿನ ಜೀವಕ್ಕೆ ಅಪಾಯ ಆಗಬಹುದು ಸಾರ್‌' ಎಂದ. 'ಹಲೋ, ನೀವು ಯಾರು? ನಾನು ಈ ಮೊದಲು ಬಂದಾಗ ನೀವು ಎಲ್ಲಿ ನಿಂತಿದ್ರಿ?' ಎಂದು ಪ್ರಶ್ನಿಸಿದೆ. ಮರುಕ್ಷಣವೇ ಫೋನು ಡಿಸ್‌ಕನೆಕ್ಟ್ ಆಯಿತು.
ತಕ್ಷಣವೇ ಸ್ಕೂಟರ್ ಏರಿ ಮತ್ತೆ ಹೊರಟೆ. ಫೋನ್‌ನಲ್ಲಿ ಬಂದ ಮಾಹಿತಿಯನ್ನು ನೆನಪಿಟ್ಟುಕೊಂಡೇ ನಡೆದು ಹೋದೆ. ಕಸದ ತೊಟ್ಟಿಯಿಂದ ಮಾರು ದೂರದಲ್ಲಿ ಬಟ್ಟೆ ತುಂಬುವಂಥ ಒಂದು ಬ್ಯಾಗ್ ಬಿದ್ದಿತ್ತು. ಕುತೂಹಲದಿಂದಲೇ ಹತ್ತಿರ ಹೋಗಿ ನೋಡಿದೆ. ಅದರ ಜಿಪ್ ಹಾಕಿತ್ತು. ಕ್ಯೂರಿಯಾಸಿಟಿಯಿಂದಲೇ ಜಿಪ್ ತೆಗೆದರೆ, ಅದರೊಳಗೆ ನವಜಾತ ಶಿಶುವೊಂದು ಗೋಚರಿಸಿತು. ಬ್ಯಾಗ್‌ನ ಜಿಪ್ ಹಾಕಿದ್ದರಿಂದ, ಉಸಿರಾಟದ ತೊಂದರೆ ಕಾಣಿಸಿಕೊಂಡು ಆ ಮಗುವಿನ ಬಾಯಿಂದ ನೊರೆ ಬಂದಿತ್ತು. ಆ ಮಗುವಿನ ಮೈ ತುಂಬಾ ಇರುವೆಗಳು ಮುತ್ತಿಕೊಂಡಿದ್ದವು. ಆ ಸಂದರ್ಭದಲ್ಲಿ, ಅಳುವ ಶಕ್ತಿ ಕೂಡ ಆ ಮಗುವಿಗೆ ಇರಲಿಲ್ಲ. ತಕ್ಷಣವೇ ಆ ಮಗುವನ್ನು ಬ್ಯಾಗ್‌ನಿಂದ ಹೊರತೆಗೆದೆ. ಆಗ ಗೊತ್ತಾಗಿದ್ದೇನೆಂದರೆ, ಅದು ಗಂಡು ಮಗು! ಯಾರಾದರೂ ಗಮನಿಸುತ್ತಿದ್ದಾರಾ ಎಂದು ಸುತ್ತಲೂ ನೋಡಿದೆ. ಉಹುಂ, ಯಾರೂ ಕಾಣಿಸಲಿಲ್ಲ. ಆ ಮಗುವನ್ನು ಟವಲ್‌ನಿಂದ ಕ್ಲೀನ್ ಮಾಡಿ, ಸ್ಕೂಟರ್‌ನಲ್ಲಿ ಕಾಲಿಡಲಿಕ್ಕೆ ಇದ್ದ ಜಾಗದಲ್ಲಿ ಹುಷಾರಾಗಿ ಮಲಗಿಸಿಕೊಂಡು ಸಮೀಪದ ಆಸ್ಪತ್ರೆಗೆ ಹೋಗಿ, ಸೂಕ್ತ ಚಿಕಿತ್ಸೆಗಾಗಿ ವಿನಂತಿಸಿಕೊಂಡೆ. ಎರಡು ದಿನಗಳ ನಂತರ ಡಾಕ್ಟರ್ ಹೇಳಿದರು: ' ನಿಮ್ಮ ಮಗು ಹುಷಾರಾಗಿದೆ. ಈಗ ಮನೆಗೆ ಕರ್ಕೊಂಡು ಹೋಗಬಹುದು!'
ಹೊಸದೊಂದು ಮುದ್ದುಕಂದ ನಮ್ಮ ಸಂಸ್ಥೆಯ ಸದಸ್ಯನಾದದ್ದು ಹೀಗೆ. ಈ ಮಗುವಿಗೆ ಹೆಸರಿಡಬೇಕು ಅನ್ನಿಸಿದಾಗ 'ಅಭಿಲಾಷ್‌' ಎಂಬ ಹೆಸರು ನೆನಪಾಯಿತು. ಅಭಿಲಾಷ್ ಎಂಬ ಪದಕ್ಕೆ ಭರವಸೆ, ನಂಬಿಕೆ ಎಂದೆಲ್ಲಾ ಅರ್ಥಗಳಿವೆ. ಈ ಮಗು, ಇಡೀ ಸಂಸ್ಥೆಗೆ ಹೊಸ ಭರವಸೆಯಂತೆ ಬದುಕಲಿ ಎಂಬ ಸದಾಶಯದಿಂದಲೇ ಅವನಿಗೆ ಅಭಿಲಾಷ್ ಎಂದು ನಾಮಕರಣ ಮಾಡಿದೆ. ಉದವುಂ ಕರಂಗಳ್‌ನಲ್ಲಿ ಇರುವವರೆಲ್ಲ ಅನಾಥ ಮಕ್ಕಳೇ. ಅವರಿಗೆ ಐಡೆಂಟಿಟಿ ಕ್ರೈಸಿಸ್ ಕಾಡದಿರಲಿ ಎಂಬ ಉದ್ದೇಶದಿಂದ ಅವರ ಹೆಸರಿನ ಮುಂದೆ ನನ್ನ ಹೆಸರನ್ನೂ ಸೇರಿಸುತ್ತೇನೆ. ಹಾಗಾಗಿ, ಉದವುಂ ಕರಂಗಳ್‌ನ ಎಲ್ಲ ಮಕ್ಕಳ ಹೆಸರಿನ ಜೊತೆಗೂ ವಿದ್ಯಾಕರ್ ಎಂಬ ಹೆಸರೂ ಅಂಟಿಕೊಂಡಿರುತ್ತದೆ. ಈ ಕಾರಣದಿಂದಲೇ ಅಭಿಲಾಷ್‌ನ ಪೂರ್ಣ ಹೆಸರು ಅಭಿಲಾಷ್ ವಿದ್ಯಾಕರ್ ಎಂದಾಯಿತು.
ಚಿಕ್ಕಂದಿನಿಂದಲೂ ಅಷ್ಟೆ: ಅಭಿಲಾಷ್ ತುಂಬಾ ಚೂಟಿಯಾಗಿದ್ದ. ತರಗತಿಯಲ್ಲಿ ಪ್ರತಿ ವರ್ಷವೂ ಅವನಿಗೇ ಮೊದಲ ಸ್ಥಾನ. ನಮ್ಮ ಸಂಸ್ಥೆಯಲ್ಲಿರುವ ಮಕ್ಕಳೆಲ್ಲಾ ನನ್ನನ್ನು ಪಪ್ಪ ಅನ್ನುತ್ತಾರೆ. ಒಂದೊಂದು ಹೊಸ ಪ್ರೈಜ್ ಸಿಕ್ಕಾಗಲೂ ಈ ಅಭಿಲಾಷ್, ಪಪ್ಪಾ ಎಂದು ಕೂಗು ಹಾಕುತ್ತಾ ಓಡಿ ಬರುತ್ತಿದ್ದ. ಕುತ್ತಿಗೆಗೆ ಜೋತು ಬೀಳುತ್ತಿದ್ದ. ಇವತ್ತೊಂದು ಬಹುಮಾನ ಸಿಕ್ತು ಎಂದು ಪಿಸುಗುಡುತ್ತಿದ್ದ. ಆದರೆ, ಹೈಸ್ಕೂಲು ತಲುಪುತ್ತಿದ್ದಂತೆಯೇ ಅವನ ವರ್ತನೆಯಲ್ಲಿ ವ್ಯತ್ಯಾಸ ಕಾಣಿಸಿತು. ಅದೊಂದು ಸಂಜೆ ಶಾಲೆಯಿಂದ ಬಂದವನೇ- 'ಪಪ್ಪಾ, ಸ್ವಲ್ಪ ಮಾತನಾಡಲಿಕ್ಕಿದೆ' ಅಂದ. ಏನು ಹೇಳಲಿಕ್ಕಿದೆ? ಹೇಳು ಮಗೂ ಅಂದೆ. 'ಪಪ್ಪಾ, ನನಗೆ ಅಮ್ಮ ಇಲ್ವಲ್ಲ ಯಾಕೆ? ಸ್ಕೂಲ್‌ನಲ್ಲಿ ಮಧ್ಯಾಹ್ನದ ಹೊತ್ತು ಉಳಿದೆಲ್ಲ ಮಕ್ಕಳ ಅಮ್ಮಂದಿರೂ ಬರ್ತಾರೆ. ಮಕ್ಕಳಿಗೆ ಊಟ ಬಡಿಸ್ತಾರೆ. ನಂತರ ಮಕ್ಕಳ ಕೈ ತೊಳೆದು, ಬಾಯಿ ಒರೆಸಿ, ದೃಷ್ಟಿ ನಿವಾಳಿಸಿ ಹೋಗ್ತಾರೆ. ನನಗೆ ಮಾತ್ರ ಹಾಗೆ ಮಾಡುವವರೇ ಇಲ್ಲ. ಯಾಕೆ ಪಪ್ಪಾ? ನಂಗೆ ಅಮ್ಮನೇ ಇಲ್ವ? ನನ್ನ ಅಮ್ಮ ಯಾರು ಅಂತ ನಿಮಗೂ ಗೊತ್ತಿಲ್ವ? ಹೋಗ್ಲಿ, ನಾನು ಯಾರು? ನಿಮಗೆ ಹೇಗೆ ಸಿಕ್ಕಿದೆ ಅಂತ ಹೇಳ್ತೀರಾ?' ಅಂದ. ಈ ಸಂದರ್ಭದಲ್ಲಿ ಅವನಿಗೆ ಎಲ್ಲ ಕಥೆಯನ್ನು ಹೇಳುವುದೇ ಒಳ್ಳೆಯದು ಅನ್ನಿಸಿತು. ಮುಚ್ಚುಮರೆಯಿಲ್ಲದೆ ಹೇಳಿಬಿಟ್ಟೆ.
ತನ್ನ 'ಜನ್ಮರಹಸ್ಯ' ತಿಳಿದ ಮೇಲೆ ಅಭಿಲಾಷ್ ಖಿನ್ನನಾದ. ತಕ್ಷಣವೇ ಅವನನ್ನು ಉತ್ತರ ಭಾರತ ಪ್ರವಾಸಕ್ಕೆ ಕಳಿಸಿದೆ. ಪ್ರವಾಸದ ನೆಪದಲ್ಲಿ ಅವನು ನೋವನ್ನೆಲ್ಲ ಮರೆಯಲಿ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಅಲ್ಲಿಂದ ಹಿಂದಿರುಗಿದ ನಂತರವೂ, ಆತ ಸಂಕಟದ ಮುಖದೊಂದಿಗೇ ಎದುರಾಗುತ್ತಿದ್ದ. ಆಗಲೇ ಅವನನ್ನು ಎದುರಲ್ಲಿ ಕೂರಿಸಿಕೊಂಡು ಹೇಳಿದೆ: ನಿನಗೆ ಹೆತ್ತವರು ಏನೇನು ಸೌಲಭ್ಯ ಒದಗಿಸುತ್ತಿದ್ದರೋ, ಅದನ್ನೆಲ್ಲ ಒದಗಿಸಿದ್ದೇನೆ. ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಹೇಳಿಕೊಂಡಿದ್ದೇನೆ. ನೀನು ಪಪ್ಪಾ ಎಂದಾಗೆಲ್ಲ ಖುಷಿಪಟ್ಟಿದ್ದೇನೆ. ಗೆದ್ದು ಬಂದಾಗ ಬೀಗಿದ್ದೇನೆ. ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಬಿಕ್ಕಳಿಸಿದ್ದೇನೆ. ಈ ಮಗು ಬೇಗ ಹುಷಾರಾಗಲಿ ದೇವರೇ ಎಂದು ಪ್ರಾರ್ಥಿಸಿದ್ದೇನೆ. ಇದನ್ನೆಲ್ಲಾ ನೀನು ಅರ್ಥ ಮಾಡಿಕೊಳ್ಳಬೇಕು. ನಿನ್ನ ಸಾಮರ್ಥ್ಯ ಏನೆಂದು ಈ ಜಗತ್ತಿಗೆ ತೋರಿಸಬೇಕು ಎಂದೆ. ಅವತ್ತು ಏನೊಂದೂ ಮಾತಾಡದೆ ಎದ್ದು ಹೋದ. ಮರುದಿನ ಬೆಳಗ್ಗೆ ಎದುರು ನಿಂತವನ ಕಂಗಳಲ್ಲಿ ಹೊಸ ಬೆಳಕಿತ್ತು. 'ಪಪ್ಪಾ, ಹಳೆಯ ಬದುಕಿನ ಬಗ್ಗೆ ಮತ್ತೆಂದೂ ಯೋಚಿಸಲಾರೆ. ನಿಮ್ಮ ಥರಾನೇ ಹತ್ತು ಮಂದಿಗೆ ಉಪಕಾರ ಮಾಡಿಕೊಂಡು ಬದುಕಬೇಕು ಅಂತ ನಿರ್ಧಾರ ಮಾಡಿದ್ದೀನಿ. ಆಲ್ ದಿ ಬೆಸ್ಟ್ ಹೇಳಿ' ಎಂದ.
ಉದವುಂ ಕರಂಗಳ್‌ನಲ್ಲಿ ಆಶ್ರಯ ಪಡೆದಿರುವ ಎಲ್ಲ ಮಕ್ಕಳೂ ಅಭಿಲಾಷ್‌ನಂತೆಯೇ ವರ್ತಿಸುತ್ತಾರೆ ಎನ್ನಲು ಸಾಧ್ಯವಿಲ್ಲ. ತಾವು ಹೆತ್ತವರಿಗೆ ಬೇಡವಾದವರು ಎಂಬ ಸಂಗತಿ ಕಡೆಗೊಂದು ದಿನ ತಿಳಿದಾಗ ಎಷ್ಟೋ ಮಕ್ಕಳು-'ಪಪ್ಪಾ, ನೀನು ನಮ್ಮನ್ನು ಯಾಕೆ ರಕ್ಷಿಸಿದೆ? ನಮ್ಮನ್ನು ಹಾಗೇ ಬಿಟ್ಟು ಬಿಡಬೇಕಿತ್ತು. ನಾವು ಅವತ್ತೇ ಸತ್ತು ಹೋಗಿದ್ರೆ ಚೆನ್ನಾಗಿರ್ತಿತ್ತು. ಈಗ ನೋಡು, ಉಳಿದೆಲ್ಲ ಮಕ್ಕಳೂ ಅಪ್ಪ-ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ-ಮಾವ, ಬಂಧು-ಬಳಗ ಎಂದು ಖುಷಿಪಡುವಾಗ ನಾವು ಅನಾಥ ಮಕ್ಕಳು ಎಂಬ ಹಣೆಪಟ್ಟಿಯೊಂದಿಗೆ ಸಂಕಟದ ಮಧ್ಯೆಯೇ ಬದುಕಬೇಕಾಗಿದೆ. ನಮ್ಮ ಈ ಸ್ಥಿತಿಗೆ ನೀನೇ ಕಾರಣ. ನೀನು ನಮ್ಮನ್ನು ಯಾಕೆ ಕಾಪಾಡಬೇಕಿತ್ತು ಎಂದು ಪ್ರಶ್ನೆ ಕೇಳುತ್ತಾರೆ. ಮತ್ತೆ ಕೆಲವರು -ಅಮ್ಮ ಎಂದರೆ ದೇವತೆ, ಆಕೆ ಕರುಣಾಮಯಿ, ತಾಯಂದಿರ ಮನಸ್ಸು ತುಂಬಾ ಒಳ್ಳೆಯದು ಎಂದೆಲ್ಲಾ ಹೇಳ್ತೀರ. ಆದ್ರೆ ನಮ್ಮ ತಾಯಂದಿರು ಅದೇಕೆ ಕಲ್ಲು ಹೃದಯದವರಾಗಿ ವರ್ತಿಸಿದರು? ತಂದೆ ಅನ್ನಿಸಿಕೊಂಡವನು ನಮ್ಮನ್ನು ಎಸೆದು ಹೋಗಿಬಿಟ್ಟ ಸರಿ. ಆದರೆ ತಾಯಿಯಾದವಳಾದ್ರೂ ನಮ್ಮನ್ನು ಸಾಕಬಹುದಿತ್ತು ತಾನೆ ಎಂದು ಪ್ರಶ್ನೆ ಹಾಕಿದ್ದಾರೆ. ತಾವು ಅನಾಥರು, ಅನೈತಿಕ ಸಂಬಂಧಕ್ಕೆ ಹುಟ್ಟಿದವರು ಎಂಬುದನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟದಿಂದ ನರಳಿದವರಿದ್ದಾರೆ. ಹೆತ್ತಮ್ಮನೇ ನಮ್ಮನ್ನು ಬಿಟ್ಟು ಹೋದಳು ಎಂಬ ಕಾರಣಕ್ಕಾಗಿ ಇಡೀ ಸ್ತ್ರೀ ಸಂಕುಲದ ಬಗ್ಗೆಯೇ ಜಿಗುಪ್ಸೆ ಹೊಂದಿದ ಮಕ್ಕಳೂ ಇದ್ದಾರೆ.
ಅಂಥವರಿಗೆಲ್ಲ ನಾನು ಹೇಳಿರುವುದು ಒಂದೇ ಮಾತು: ಅಮ್ಮಂದಿರು ಯಾವತ್ತೂ ಕರುಣಾಮಯಿಗಳೇ. ಪರಿಸ್ಥಿತಿಯ ಕಾರಣದಿಂದಾಗಿ ಅವರು ತಪ್ಪು ಮಾಡಿರಬಹುದು. ಹಾಗಂತ ಅವರನ್ನು ದ್ವೇಷಿಸುವುದು ಸರಿಯಲ್ಲ. ಹಾಗೆಯೇ, ಹೆತ್ತವರ ಪ್ರೀತಿ ಅನೈತಿಕವಾಗಿರಬಹುದು. ಅದು ಅವರ ತಪ್ಪು. ಐಡೆಂಟಿಟಿ ಇಲ್ಲದೆ ಹುಟ್ಟಿದ್ದರಲ್ಲಿ ನಿಮ್ಮ ತಪ್ಪಿಲ್ಲ. ಇನ್ನು ನಿಮ್ಮನ್ನು ರಕ್ಷಿಸಿದ ವಿಷಯಕ್ಕೆ ಬರುವುದಾದರೆ- ಅನಾಥ ಮಗುವಿನ ರೂಪದಲ್ಲಿ ನಿಮ್ಮನ್ನು ಕಂಡಾಗ, ನನಗೆ ವಿಪರೀತ ಸಂಕಟವಾಯಿತು. ನಿಮ್ಮನ್ನು ಕಾಪಾಡದೇ ಹೋಗಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದೇ ನನ್ನ ಕಾಯಕವಾಗಲಿ ಎಂದುಕೊಂಡೇ ನಿಮ್ಮನ್ನು ಉದವುಂ ಕರಂಗಳ್‌ನ ಅಂಗಳಕ್ಕೆ ಕರೆತಂದೆ ಎಂದು ಉತ್ತರಿಸಿದ್ದೇನೆ. ಈ ಉತ್ತರದಿಂದ ಕೆಲವು ಮಕ್ಕಳು ಖುಷಿಯಾಗಿದ್ದಾರೆ. ವಿ ಆರ್ ಪ್ರೌಡ್ ಆಫ್ ಯೂ ಪಪ್ಪಾ ಎನ್ನುತ್ತಾ ಬಿಕ್ಕಳಿಸಿದ್ದಾರೆ. ಮತ್ತೆ ಕೆಲವರು ಏನೊಂದೂ ಮಾತಾಡದೆ ಎದ್ದು ಹೋಗಿದ್ದಾರೆ. ಮೊದಲೇ ಹೇಳಿದಂತೆ ನಮ್ಮ ಸಂಸ್ಥೆಯಲ್ಲಿ ಇರುವವರೆಲ್ಲಾ ನನ್ನ ಮುದ್ದಿನ ಮಕ್ಕಳೇ. ಅವರು ಹೇಗೆ ಪ್ರತಿಕ್ರಿಯಿಸಿದರೂ ನಾನಂತೂ ಅವರ ಮೇಲೆ ಸಿಟ್ಟಾಗಲಾರೆ. ಉಳಿದೆಲ್ಲ ಮಕ್ಕಳಿಗಿಂತ ಸ್ವಲ್ಪ ಜಾಸ್ತಿ ಎಂಬಂಥ ಅಕ್ಕರೆ ಅಭಿಲಾಷ್‌ನ ಮೇಲಿದೆ. ಏಕೆಂದರೆ, ನಮ್ಮ ಸಂಸ್ಥೆಯಲ್ಲಿ ಓದಿದ ಇತರ ಮಕ್ಕಳೆಲ್ಲ  ಡಾಕ್ಟರ್, ಎಂಜಿನಿಯರ್, ಟೀಚರ್, ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. ಆದರೆ ಅಭಿಲಾಷ್ ಐಎಎಸ್ ಪರೀಕ್ಷೆ ಬರೆಯುವ ಹುಮ್ಮಸ್ಸಿನಲ್ಲಿದ್ದಾನೆ. ಐಎಎಸ್ ನಂತರ ನಾನೂ ನಿನ್ನ ಥರಾನೇ ಅನಾಥರಿಗೆ ಆಶ್ರಯ ಒದಗಿಸ್ತೀನಿ ಪಪ್ಪಾ ಎಂದು ಪ್ರಾಮಿಸ್ ಮಾಡಿದ್ದಾನೆ. ಅವನಂಥ ಮಕ್ಕಳ ಕಾರಣದಿಂದಲೇ ನನ್ನ ಬದುಕಿಗೆ ಹೊಸ ಅರ್ಥ ಬಂದಿದೆ ಎನ್ನುತ್ತಾ ಮಾತು ಮುಗಿಸುತ್ತಾರೆ ವಿದ್ಯಾಕರ್.
ಇವತ್ತಿನ ಸಂದರ್ಭದಲ್ಲಿ, ಗಂಡ-ಹೆಂಡತಿ ಇಬ್ಬರೂ ದುಡಿದರೂ ಎರಡು ಮಕ್ಕಳನ್ನು ಸಾಕುವುದು ಕಷ್ಟ. ವಾಸ್ತವ ಹೀಗಿರುವಾಗ, ಬ್ರಹ್ಮಚಾರಿಯಾಗಿದ್ದುಕೊಂಡೂ 300ಕ್ಕೂ ಹೆಚ್ಚು ಮಕ್ಕಳನ್ನು ಸಾಕುತ್ತಾ, ಅವರ ಏಳಿಗೆಯಲ್ಲೇ ಸಂತೋಷ ಕಾಣುತ್ತಿರುವ ವಿದ್ಯಾಕರ್‌ಗೆ ಲಾಲ್ ಸಲಾಂ ಎಂದು ಮನಸ್ಸು ಪಿಸುಗುಟ್ಟಿದ ಮರುಕ್ಷಣವೇ, ಫುಟ್‌ಪಾತಿನಿಂದ ಐಎಎಸ್ ಅಂಗಳಕ್ಕೆ ಜಿಗಿಯಲು ಹೊರಟಿರುವ ಅಭಿಲಾಷ್‌ನ ಮಾತುಗಳೂ ಆರಂಭವಾದವು. ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ-
'ನನ್ನ ನಿಜ ಜೀವನದ ಕಥೆಯನ್ನು ಪಪ್ಪನಿಂದ ತಿಳಿದಾಗ ಬಹಳ ಸಂಕಟವಾಯಿತು. ಹೆತ್ತವರಿಗೇ ಹೊರೆಯಾದೆ ಅಂದಮೇಲೆ ನನ್ನದೂ ಒಂದು ಬದುಕಾ ಅನ್ನಿಸಿತು. ನಾನು ಅನಾಥ ಶಿಶು ಎಂದು ಗೊತ್ತಾದರೆ, ಗೆಳೆಯರೆಲ್ಲ ನನ್ನನ್ನು ತಾತ್ಸಾರದಿಂದ ನೋಡಬಹುದು ಅನ್ನಿಸಿತು. ಹಾಗಾಗಿ, ಹಾಸ್ಟೆಲ್‌ನಿಂದ ಬರ್ತಾ ಇದೀನಿ ಎಂದು ಯಾರಿಗೂ ಹೇಳಲಿಲ್ಲ. ನಮ್ಮ ಹೆತ್ತವರು ದೂರದ ಹಳ್ಳಿಯಲ್ಲಿದ್ದಾರೆ ಎಂದೆಲ್ಲಾ ಸುಳ್ಳು ಹೇಳುತ್ತಿದ್ದೆ. ಶಾಲೆಯ ಅಂಗಳದಲ್ಲಿ  ಅಮ್ಮಂದಿರು ಮಕ್ಕಳಿಗೆ ಊಟ ಮಾಡಿಸುವಾಗ ಹೀಗೆ ಕೈ ತುತ್ತು ತಿನ್ನುವ ಅದೃಷ್ಟ ನನಗಿಲ್ಲವಲ್ಲ ಎಂದುಕೊಂಡು ಕಣ್ಣೀರಾಗುತ್ತಿದ್ದೆ. ದಸರಾ, ಬೇಸಿಗೆಯ ರಜಾ ದಿನಗಳಲ್ಲಿ ಊರಿಗೆ ಹೋಗಿ ಬಂದ ಸಹಪಾಠಿಗಳು, ಅಜ್ಜಿ ಮನೇಲಿ ಹೀಗಾಯ್ತು, ನಮ್ ತಾತ ಹೊಸ ಬಟ್ಟೆ ಕೊಡಿಸಿದ್ರು ಎಂದೆಲ್ಲಾ ಹೇಳುವಾಗ, ಇಂಥ ಯಾವುದೇ ಅದೃಷ್ಟವೂ ಇಲ್ಲದಿರುವಾಗ ನನ್ನಂಥವರು ಬದುಕಿದ್ದು ಏನು ಪ್ರಯೋಜನ ಅನ್ನಿಸ್ತು. ಅದನ್ನೇ ಒಂದು ದಿನ ಪಪ್ಪಾ ವಿದ್ಯಾಕರ್ ಜೊತೆ ಹೇಳಿಕೊಂಡೆ. ಆಗ ಪಪ್ಪ ಹೇಳಿದ್ರು: 'ದೇವರು ಪ್ರತಿ ಮನುಷ್ಯನಿಗೂ 100 ವರ್ಷ ಆಯಸ್ಸು ಕೊಟ್ಟಿರ್ತಾನೆ. ಅಂಥಾ ಜೀವಿಗಳಲ್ಲಿ ನೀನೂ ಒಬ್ಬ. ನಾನು ಕಾಪಾಡದೇ ಹೋಗಿದ್ರೆ ಹುಟ್ಟಿದ ಮೂರೇ ದಿನಕ್ಕೆ ನೀನು ಸತ್ತು ಹೋಗ್ತಾ ಇದ್ದೆ. ಮಗುವಿನ ರೂಪದಲ್ಲಿ ನಿನ್ನನ್ನು ಕಂಡಾಗ ಕಾಪಾಡದೇ ಇರಲು ಮನಸ್ಸಾಗಲಿಲ್ಲ...' ಅವರ ಮಾತಿಗೆ ಪ್ರತಿಕ್ರಿಯಿಸದೆ ಸುಮ್ಮನೆ ನಿಂತಿದ್ದೆ. ಆಗ ಪಪ್ಪ ಒಂದು ಫೋಟೋ ತೋರಿಸಿದರು. ಅದು ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ನಾನಿದ್ದ ಫೋಟೋ. ಅದೊಮ್ಮೆ ಹೊಸ ವರ್ಷಕ್ಕೆ ಕ್ಯಾಲೆಂಡರ್ ರೂಪಿಸಬೇಕು ಅನ್ನಿಸಿದಾಗ, ಪಪ್ಪಾ ವಿದ್ಯಾಕರ್‌ಗೆ ಫೋನ್ ಮಾಡಿದ ರಜನಿಯವರು-ನಿಮ್ಮ ಸಂಸ್ಥೆಯಲ್ಲಿರುವ ಮಕ್ಕಳನ್ನು ಎತ್ತಿಕೊಂಡು ಬನ್ನಿ ಸಾರ್. ಹೊಸಾ ಕ್ಯಾಲೆಂಡರ್ ರೂಪಿಸೋಣ' ಅಂದರಂತೆ. ಮನೆಗೆ ಹೋದಾಗ, ರಜನಿಕಾಂತ್ ದಂಪತಿ, ಗಂಟೆಗಳ ಕಾಲ ನನ್ನನ್ನು ಮುದ್ದಿಸಿದರಂತೆ. ಈ ಘಟನೆಯನ್ನು ನೆನಪಿಸಿದ ಪಪ್ಪ- ಇಂಥ ಅದೃಷ್ಟ ಎಷ್ಟು ಮಕ್ಕಳಿಗಿದೆ ಯೋಚಿಸು. ಮಾನವ ಜನ್ಮ ದೊಡ್ಡದು ಮಗೂ. ಅದನ್ನು ಲೋಕೋಪಕಾರಕ್ಕೆ ಬಳಸಿಕೊ' ಎಂದರು.
ಅವತ್ತಿನವರೆಗೂ ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎಂದುಕೊಂಡಿದ್ದವ ನಾನು. ಆದರೆ, ಪಪ್ಪನ ಮಾತು ಕೇಳುತ್ತಿದ್ದಂತೆಯೇ ಐಎಎಸ್ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಕಾರಣವಿಷ್ಟೆ: ಐಎಎಸ್ ಮಾಡಿದರೆ, ಸಮಾಜ ಸೇವೆ ಮಾಡಲು ದೊಡ್ಡ ಅವಕಾಶಗಳಿವೆ. ಪಪ್ಪಾ ವಿದ್ಯಾಕರ್ ಅವರಂತೆಯೇ ನೊಂದವರು, ಅನಾಥರು ಹಾಗೂ ಅಸಹಾಯಕರ ಸೇವೆ ಮಾಡಬೇಕು ಎಂಬುದು ನನ್ನ ಆಸೆ-ಕನಸು. ಅದನ್ನು ಎದೆಯೊಳಗೆ ಇಟ್ಟುಕೊಂಡೇ ಐಐಎಸ್ ಬರೆಯಲು ಸಿದ್ಧತೆ ನಡೆಸಿದ್ದೇನೆ. ನನಗೆ ಒಂದು ಬೆಸ್ಟ್ ಆಫ್ ಲಕ್ ಹೇಳಿಬಿಡಿ. ನನ್ನಂಥ ನೂರಾರು ಮಕ್ಕಳಿಗೆ ಹೊಸ ಬದುಕು ಕೊಟ್ಟಿರುವ ಪಪ್ಪಾ ವಿದ್ಯಾಕರ್‌ಗೂ ಥ್ಯಾಂಕ್ಸ್ ಅಂದುಬಿಡಿ. ನನಗೆ ಅಷ್ಟೇ ಸಾಕು' ಎನ್ನುತ್ತಾ ಮಾತು ಮುಗಿಸುತ್ತಾನೆ ಅಭಿಲಾಷ್.

ಅಪರೂಪದಲ್ಲಿ ಅಪರೂಪದವರು ಎಂಬಂಥ ಈ ತಂದೆ-ಮಗನಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ  udavum@vsnl.com

ಕೃಪೆ: ಕನ್ನಡ ಪ್ರಭ, -ಎ.ಆರ್. ಮಣಿಕಾಂತ್

PORTFOLIO

Let's Get In Touch!

Ready to join your hands with us? That's great! Give us a call or send us an email and we will get back to you as soon as possible!

+91 9945457193